ನಾಟಿಲಸ್
ಮೃದ್ವಂಗಿ ವಂಶದ, ಶಿರಪಾದಿ ವರ್ಗ, ಟೆಟ್ರಬ್ರ್ಯಾಂಕಿಯ ಗಣ, ನಾಟಿಲಿಡೀ ಕುಟುಂಬಕ್ಕೆ ಸೇರಿದ ಒಂದು ಮೃದ್ವಂಗಿ. ಇವನ್ನು ಜೀವಚಿತ ಸಬ್‍ಮೆರಿನ್ ಎಂದೂ ಕರೆಯಬಹುದು. ಇದರಲ್ಲಿ ನಾಲ್ಕು ಪ್ರಭೇದಗಳುಂಟು. ಇವು ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಕಾಣ ದೊರೆಯುತ್ತದೆ. ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಇವುಗಳ ವಾಸ. ಹಗಲೆಲ್ಲ ತಳದಲ್ಲಿದ್ದು ರಾತ್ರಿ ವೇಳೆ ನೀರಿನ ಮೇಲ್ಭಾಗಕ್ಕೆ ಬರುತ್ತವೆ. ಚಿಪ್ಪು ಸಿಂಬಿಯಾಕಾರದಲ್ಲಿ ಸುರುಳಿ ಸುತ್ತಿಕೊಂಡಿದೆ; ಕೇಂದ್ರ ಭಾಗದಲ್ಲಿ ಒಂದು ಪುಟ್ಟ ಅವಕಾಶ (ಸ್ಪೇಸ್) ಇದ್ದು ಅದರ ಸುತ್ತ ಕ್ರಮೇಣ ದೊಡ್ಡವಾಗುವ ಅನೇಕ ಕೋಣೆಗಳುಂಟು; ಕೋಣೆಗಳು ಬಾಗಿದ ಭಿತ್ತಿಗಳಿಂದ ಪರಸ್ಪರ ಬೇರೆಬೇರೆಯಾಗಿದೆ. ತೀರ ಹೊರಗಿನ ಮತ್ತು ಉಳಿದೆಲ್ಲ ಕೋಣೆಗಳಿಗಿಂತ ದೊಡ್ಡದಾದ ಕೋಣೆಯೇ ಪ್ರಾಣಿದೇಹ ಸ್ಥಿತವಾಗಿರುವ ಕೋಣೆ. ಇತರ ಕೋಣೆಗಳು ಅನಿಲದಿಂದ (ಇದು ವಾಯುವಿನಂತೆ ಇದೆಯಾದರೂ ಇದರಲ್ಲಿ ಆಕ್ಸಿಜನ್ನಿನ ಪ್ರಮಾಣ ಬಲು ಕಡಿಮೆ) ಭರ್ತಿಯಾಗಿದೆ. ಈ ಅನಿಲದ ಮೊತ್ತವನ್ನು ಹೆಚ್ಚುಕಡಿಮೆ ಮಾಡುವುದರ ಮೂಲಕ ಪ್ರಾಣಿ ಬೇಕೆನಿಸಿದಾಗ ಸಾಗರ ತಳಕ್ಕೆ ಇಳಿಯಬಲ್ಲದು ಇಲ್ಲವೆ ಮೇಲಕ್ಕೆ ಏರಬಲ್ಲದು. ಕೋಣೆಗಳ ನಡುವಣ ಭಿತ್ತಿಗಳ ಮಧ್ಯಭಾಗದಲ್ಲಿ ಹಾದುಹೋಗುವಂಥ ಒಂದು ಕಿರುನಳಿಕೆಯುಂಟು. ಅಂಗಸದಿಂದ (ವಿಸರ) ಹೊರಡುವ ಸೈಫಂಕಲ್ ಎಂಬ ನಾಳ ಇದರೊಳಗೆ ಚಾಚಿಕೊಂಡಿದೆ. ರಕ್ತನಾಳಗಳಿಂದ ಕೂಡಿದ ಈ ನಾಳ ಚಿಪ್ಪಿನ ಕೋಣೆಗಳಲ್ಲಿ ತುಂಬಿಕೊಂಡಿರುವ ಅನಿಲವನ್ನು ಉತ್ಪಾದಿಸುತ್ತದೆ ಎಂದು ಬಗೆಯಲಾಗಿದೆ. ತಲಾ ಎರಡು ಜೊತೆ ಟೀನಿಡಿಯ ಹಾಗೂ ಮೂತ್ರಪಿಂಡಗಳಿರುವುದು. ತುಂಬ ಹೇರಳವಾದ ಕಣ್ಣುಗಳನ್ನು  ಪಡೆದಿರುವುದು (ಕಣ್ಣು ಒಂದು ಕುಳಿಯಂತಿದೆ; ಇದರಲ್ಲಿ ಮಸೂರವೇ ಇಲ್ಲ), ಮಸಿ ಚೀಲ ಇಲ್ಲದಿರುವುದು-ಈ ಲಕ್ಷಣಗಳಿಂದಾಗಿ ನಾಟಿಲಸ್ ಉಳಿದ ತೆರನ ಶಿರಪಾದಿಗಳಿಂದ (ಸೆಫಲಪಾಡ್ಸ್) ಭಿನ್ನವೆನಿಸಿವೆ.
(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ